
ಯಲಬುರ್ಗಾ ತಾಲೂಕಿನ ಹುನಸಿಹಾಳ್ ಗ್ರಾಮದಲ್ಲಿ ಪವರ್ ಗ್ರಿಡ್ ಟ್ರಾನ್ಸ್ಮಿಷನ್ ಕಂಪನಿಯ ವಿರುದ್ಧ ರೈತರಿಂದ ಗಂಭೀರ ಆರೋಪ ಕೇಳಿಬಂದಿದೆ. ಲೈನ್ ಹಾಕುವ ನೆಪದಲ್ಲಿ ರೈತರ ಹೊಲಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಪಡಿಸಿ, ಯಾವುದೇ ರೀತಿಯ ಪರಿಹಾರ ನೀಡದೇ ದೌರ್ಜನ್ಯ ಎಸಗಲಾಗಿದೆ ಎಂದು ರೈತರು ದೂರಿದ್ದಾರೆ.

ಈ ಕುರಿತು ರೈತರು ಮಾಧ್ಯಮಗಳನ್ನು ಸಂಪರ್ಕಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರ ನೀಡುವವರೆಗೆ ಕಾಮಗಾರಿ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.ರೈತ ನಾಗಪ್ಪ ಗೊಂದಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಹೊಲದಲ್ಲಿದ್ದ ಶೇಂಗಾ ಬೆಳೆಯನ್ನು ಹಾಳು ಮಾಡಿರುವುದಲ್ಲದೆ, ತಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಪರಿಹಾರ ನೀಡದ ಹಿನ್ನೆಲೆಯಲ್ಲಿ ಅವರು ಪವರ್ ಗ್ರಿಡ್ ಕಂಬದ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದಾರೆ.“ನಮ್ಮ ಜಮೀನಿನಲ್ಲಿ ಬೆಳೆದ ಬೆಳೆ ನಾಶಮಾಡಲು ಯಾವ ಕಾನೂನು ಹೇಳುತ್ತದೆ? ನಾವು ಬೆಳೆ ತೆಗೆದುಕೊಂಡ ನಂತರ ಕೆಲಸ ಮಾಡಿ ಎಂದರೂ ಅಧಿಕಾರಿಗಳು ಕೇಳದೆ ದೌರ್ಜನ್ಯ ಮಾಡುತ್ತಿದ್ದಾರೆ. ಸೂಕ್ತ ಪರಿಹಾರ ಸಿಗುವವರೆಗೆ ನಾನು ಕಂಬದಿಂದ ಇಳಿಯುವುದಿಲ್ಲ,” ಎಂದು ನಾಗಪ್ಪ ಗೊಂದಿ ತಿಳಿಸಿದ್ದಾರೆ.ಸ್ಥಳೀಯ ರೈತರು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದು, ಸರಕಾರ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.





