
ಯಲಬುರ್ಗಾ (ಕೊಪ್ಪಳ ಜಿಲ್ಲೆ):ಸರಕಾರದ ನಿಯಮಗಳನ್ನು ಧಿಕ್ಕರಿಸಿ ಮಣ್ಣು ಸಾಗಾಣಿಕೆ ನಡೆಸುತ್ತಿರುವ ಘಟನೆ ಯಲಬುರ್ಗಾ ತಾಲೂಕಿನಲ್ಲಿದೆ. ಒಂದು ಪರವಾನಗಿಯನ್ನು ಪಡೆದು ಬೇರೆ ರೀತಿಯ ಕಾಮಗಾರಿ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.ಪರವಾನಗಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮತ್ತು ಭೂ ಸಮತಟ್ಟು ಮಾಡುವ ಉದ್ದೇಶಕ್ಕಾಗಿ ಅನುಮತಿ ಪಡೆದಿದ್ದರೂ, ವಾಸ್ತವದಲ್ಲಿ ಮಣ್ಣು ಬೇರೆಡೆ ಸಾಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಗುತ್ತಿಗೆದಾರ ಸಂಗಮನಾಥ ರೈತರಿಗೆ ಹಣದ ಆಸೆ ತೋರಿಸಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿಗಳು ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಾಜೇಶೇಖರ್ ಶಾಗೋಟಿ, ಯಲಬುರ್ಗಾ ಸರ್ವೇ ನಂ. 679/** (21 ಎಕರೆ 7 ಗುಂಟೆ ಪೈಕಿ 2 ಎಕರೆ) ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಶರತ್ತುಬದ್ಧ ಅನುಮತಿ ನೀಡಲಾಗಿತ್ತು.

ಆದರೆ ಆ ಶರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.ಇದೇ ವೇಳೆ ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವರದಿ: ಶಶಿಧರ್ ಹೊಸಮನಿ, ಕೊಪ್ಪಳ ಜಿಲ್ಲೆ, ಯಲಬುರ್ಗಾ




