
ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಬೇಲೂರಿನ ಪ್ರತಿಭೆ ನೀಲಾ ನಾಗಭೂಷಣ್ ಅವರು ೧,೪೦೦ ವಚನಗಳನ್ನು ಕಂಠಪಾಠ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದು ಒಂದು ಲಕ್ಷ ರೂ. ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಸಾಧನೆಯಿಂದ ತಾಲೂಕಿಗೆ ಹೆಮ್ಮೆ ಮೂಡಿದೆ.ಕಠಿಣ ಸ್ಪರ್ಧೆಯ ನಡುವೆಯೂ ತಮ್ಮ ಅದ್ಭುತ ಸ್ಮರಣಶಕ್ತಿ ಮತ್ತು ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ ನೀಲಾ ನಾಗಭೂಷಣ್ ಅವರಿಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಯುವ ಪೀಳಿಗೆಯಲ್ಲಿ ಸಾಹಿತ್ಯ ಹಾಗೂ ವಚನಗಳ ಮೇಲಿನ ಆಸಕ್ತಿಯನ್ನು ಹೆಚ್ಚಿಸಲು ಅವರ ಸಾಧನೆ ಪ್ರೇರಣೆಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.ಈ ಸಾಧನೆಯ ಹಿನ್ನೆಲೆಯಲ್ಲಿ ಮಹಿಳಾ ಧ್ವನಿ ಸಮಾಜ ಸೇವಾ ಸಂಘದ ವತಿಯಿಂದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷೆ ಅನ್ನಪೂರ್ಣ ಗೌಡ, ತಾಲೂಕು ಅಧ್ಯಕ್ಷೆ ಲಕ್ಷ್ಮಿ ನಾಗರಾಜ್, ಕಾರ್ಯದರ್ಶಿ ಮೀನಾಕ್ಷಿ ಹಾಗೂ ಸದಸ್ಯೆ ಇಂದಿರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸನ್ಮಾನ ಸ್ವೀಕರಿಸಿದ ನೀಲಾ ನಾಗಭೂಷಣ್ ಅವರು ಮಾತನಾಡಿ, ತಮ್ಮ ಸಾಧನೆಗೆ ಪ್ರೋತ್ಸಾಹ ನೀಡಿದ ಪೋಷಕರು ಹಾಗೂ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ತಾಲೂಕು ಹಾಗೂ ರಾಜ್ಯಕ್ಕೆ ಕೀರ್ತಿ ತರುವ ಸಂಕಲ್ಪ ವ್ಯಕ್ತಪಡಿಸಿದರು.
ವರದಿ :ನೀಲಕಂಠ ಬೇಳೂರು


