
ಬೇಳೂರು :ರಸ್ತೆಯ ದುರವಸ್ಥೆ ಮತ್ತೊಂದು ಅಮಾಯಕ ಜೀವವನ್ನು ಕಸಿದುಕೊಂಡ ದುರ್ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ವಾಟೆಹಳ್ಳ ಸೇತುವೆ ಸಮೀಪದ ಚೆಲ್ಲೇನಹಳ್ಳಿ ಗ್ರಾಮದ ಬಳಿ ನಡೆದಿದೆ.ಕಡೆಗರ್ಜೆ ಗ್ರಾಮದ ನಿವಾಸಿಯಾಗಿದ್ದ 45 ವರ್ಷದ ಚಂದ್ರಶೇಖರ್ ಅವರು ಕೆರೆಕೋಡಮ್ಮ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಸುಮಾರು 10.30ರ ವೇಳೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರಸ್ತೆಯಲ್ಲಿ ಉಂಟಾಗಿದ್ದ ದೊಡ್ಡ ಗುಂಡಿಯನ್ನು ತಪ್ಪಿಸಲು ಎದುರಿನಿಂದ ಬರುತ್ತಿದ್ದ ಟಾಟಾ ಏಸಿ ಪಿಕ್ಅಪ್ ವಾಹನ ಚಾಲಕ ಬಲಗಡೆಗೆ ತಿರುಗಿದಾಗ, ಎದುರಿಗೆ ಬರುತ್ತಿದ್ದ ಚಂದ್ರಶೇಖರ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಚಂದ್ರಶೇಖರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳೀಯರ ಪ್ರಕಾರ, ಈ ಅಪಘಾತಕ್ಕೆ ರಸ್ತೆ ದುರವಸ್ಥೆಯೇ ಪ್ರಮುಖ ಕಾರಣ. ಬೇಲೂರು–ಬಿಕ್ಕೋಡು ರಸ್ತೆಯ ಎರಡೂ ಬದಿಗಳಲ್ಲೂ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ತಾತ್ಕಾಲಿಕವಾಗಿ ಹಾಕಿದ ಪ್ಯಾಚ್ಗಳು ಸಂಪೂರ್ಣವಾಗಿ ಕಿತ್ತುಹೋಗಿವೆ. ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಬೀದಿ ದೀಪಗಳು ಹಾಗೂ ಎಚ್ಚರಿಕೆ ಫಲಕಗಳ ಕೊರತೆಯಿಂದಾಗಿ ರಾತ್ರಿ ವೇಳೆ ಸಂಚಾರ ಅಪಾಯಕಾರಿ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸ್ಥಳೀಯರ ಆಕ್ರೋಶ: “ಇದು ಎರಡನೇ ಸಾವು”ಸ್ಥಳೀಯ ನಿವಾಸಿ ಜಗದೀಶ್ ಮಾತನಾಡಿ, ಇದೇ ಸ್ಥಳದಲ್ಲಿ ಈ ಹಿಂದೆ ಅನೇಕ ಅಪಘಾತಗಳು ಸಂಭವಿಸಿರುವುದಾಗಿ ತಿಳಿಸಿದ್ದಾರೆ. “ಇದು ನಮ್ಮ ಊರಿನಲ್ಲಿ ಎರಡನೇ ಸಾವು. ಇತ್ತೀಚೆಗೆ ನಮ್ಮ ಸಂಬಂಧಿಕನೊಬ್ಬ ಕೂಡ ಇದೇ ಜಾಗದಲ್ಲಿ ಗಾಯಗೊಂಡಿದ್ದಾನೆ. ಕಳಪೆ ಕಾಮಗಾರಿಯಿಂದ ರಸ್ತೆ ದಿನೇದಿನೇ ಹದಗೆಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಗ್ರಾಪಂ ಅಧ್ಯಕ್ಷೆ ರಾಧ ಆರೋಪಘಟನೆಗೆ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಆರೋಪಿಸಿದರು. “ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿದಾಗಲೇ ಈ ಅಪಘಾತ ಸಂಭವಿಸಿದೆ. ಆ ಗುಂಡಿ ಇಲ್ಲದಿದ್ದರೆ ಒಂದು ಜೀವ ಉಳಿಯುತ್ತಿತ್ತು. ಸಣ್ಣ ಪರಿಹಾರದಿಂದ ಈ ನಷ್ಟ ಭರ್ತಿ ಆಗುವುದಿಲ್ಲ. ಮೃತರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ನೆರವು ನೀಡಬೇಕು,” ಎಂದು ಒತ್ತಾಯಿಸಿದರು.ಮೇಘನಾ ಎಚ್ಚರಿಕೆ: “ಪ್ರತಿಭಟನೆಗೆ ಇಳಿಯುತ್ತೇವೆ”ಸ್ಥಳೀಯ ನಿವಾಸಿ ಮೇಘನಾ ಮಾತನಾಡಿ, “ಚಂದ್ರಣ್ಣ ನಮ್ಮ ಊರವರೇ. ದೇವಸ್ಥಾನ ಪೂಜೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಸ್ಥಳದಲ್ಲಿ ಹಿಂದೆ ಕೂಡ ಅಪಘಾತಗಳು ನಡೆದಿವೆ. ಆದರೂ ಯಾರೂ ಗಮನ ಹರಿಸಿಲ್ಲ. ತಕ್ಷಣ ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆಗೆ ಇಳಿಯುತ್ತೇವೆ,” ಎಂದು ಎಚ್ಚರಿಸಿದರು.ತಕ್ಷಣ ಕ್ರಮಕ್ಕೆ ಒತ್ತಾಯಸ್ಥಳೀಯರು ವಾಟೆಹಳ್ಳ ಸೇತುವೆಯಿಂದ ಚೆಲ್ಲೇನಹಳ್ಳಿ ಕ್ರಾಸ್ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕು ಅಥವಾ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಬೀದಿ ದೀಪಗಳನ್ನು ಅಳವಡಿಸುವುದು, ಎಚ್ಚರಿಕೆ ಫಲಕಗಳನ್ನು ಸ್ಥಾಪಿಸುವುದು ಮತ್ತು ಅಪಘಾತ ತಡೆ ಕ್ರಮಗಳನ್ನು ಜಾರಿಗೆ ತರುವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಈ ವೇಳೆ ಗ್ರಾಮಸ್ಥರಾದ ತಾಪಂ ಮಾಜಿ ಅಧ್ಯಕ್ಷೆ ಕಮಲಾಚನ್ನಪ್ಪ, ಮಂಜುಳ, ಪೃಥ್ವಿರಾಜ್, ಚಾಮರಾಜ್, ದುಶ್ಯಂತ್, ಮಧು, ರುದ್ರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ನೀಲಕಂಠ, ಬೇಲೂರು |


