
ಚನ್ನಗಿರಿ: ತಾಲ್ಲೂಕಿನ ಹೆಬ್ಬಳಿಗೆರೆ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿಯ ಮಾರನೆಯ ದಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ, ಕೆಂಡಾರ್ಚನೆ ಹಾಗೂ ಮುಳ್ಳುಗಡೆ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಗೀತೆಗಳ ನಡುವೆ ವಿಶೇಷವಾಗಿ ಮೆರೆದವು.
ರಥೋತ್ಸವದ ಸಂದರ್ಭದಲ್ಲಿ ಭಕ್ತರು ಬಳೆಹಣ್ಣು, ಮಂಡಕ್ಕಿ ಸೇರಿದಂತೆ ವಿವಿಧ ನೈವೇದ್ಯಗಳನ್ನು ಸಮರ್ಪಿಸಿ ಭಕ್ತಿಯನ್ನು ವ್ಯಕ್ತಪಡಿಸಿದರು.ಮುಳ್ಳುಗಡೆ ಕಾರ್ಯಕ್ರಮವು ಗ್ರಾಮದಲ್ಲಿನ ವಿಶೇಷ ಆಚರಣೆಯಾಗಿದ್ದು, ಎರಡು ದಿನಗಳ ಮುಂಚಿತವಾಗಿಯೇ ಗ್ರಾಮದ ಮುಖಂಡರು ಹಾಗೂ ಯುವಕರು ತುಮಕೂರು ಸಮೀಪದ ಗುಡ್ಡ ಪ್ರದೇಶಕ್ಕೆ ತೆರಳಿ ಉಪವಾಸದೊಂದಿಗೆ ಕಾಡಿನೊಳಗೆ ಬರಿಗಾಲಲ್ಲಿ ನಡೆದು ಮುಳ್ಳುಗಳನ್ನು ಸಂಗ್ರಹಿಸಿ ದೇವಸ್ಥಾನದ ಮುಂಭಾಗದಲ್ಲಿ ಹಾಸಿದರು.

ರಥೋತ್ಸವದ ನಂತರ ಗ್ರಾಮದ ಎಲ್ಲಾ ದೈವಗಳ ಸಾನ್ನಿಧ್ಯದಲ್ಲಿ ಭಕ್ತರು ಮುಳ್ಳುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವಗಳೊಂದಿಗೆ ಮುಳ್ಳಿನ ಮೇಲೆ ನಡೆದು ಭಕ್ತಿ ಸಮರ್ಪಿಸಿದರು.ಈ ವಿಶೇಷ ಆಚರಣೆ ಪ್ರತಿವರ್ಷವೂ ಅದ್ದೂರಿಯಾಗಿ ನಡೆಯುತ್ತಿದ್ದು, ಗ್ರಾಮದ ಸಾಂಪ್ರದಾಯಿಕ ಪರಂಪರೆಯನ್ನು ಉಳಿಸಿಕೊಂಡಿದೆ ಎಂದು ಗ್ರಾಮ ಮುಖಂಡ ಎಚ್.ಎಸ್. ಶಿವಮೂರ್ತಿ (ತಾಲೂಕು ಪಂಚಾಯತಿ ಸದಸ್ಯರು) ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.


