
ಶಿವಮೊಗ್ಗ : ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿ, ತೀರ್ಥಹಳ್ಳಿಯ ವಿದ್ಯಾರ್ಥಿನಿ ಅನಘ ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್ ಪಡೆದು ಸಾಧನೆ ಮೆರೆದಿದ್ದಾಳೆ. ತೀರ್ಥಹಳ್ಳಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿರುವ ಅನಘ ಕೆ.ಎಸ್., ಒಟ್ಟು 625 ಅಂಕಗಳಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಸಾಧಿಸಿದ್ದಾಳೆ.ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಮೇಲಿನ ಕಡಗೋಡು ಗ್ರಾಮದ ನಿವಾಸಿಗಳಾದ ಮಂಗಳ ಮತ್ತು ಶಿವಕುಮಾರ ದಂಪತಿಗಳ ಪುತ್ರಿಯಾಗಿರುವ ಅನಘ, ತನ್ನ ಶ್ರಮ, ಏಕಾಗ್ರತೆ ಮತ್ತು ನಿರಂತರ ಪರಿಶ್ರಮದ ಫಲವಾಗಿ ರಾಜ್ಯ ಮಟ್ಟದ ಗೌರವವನ್ನು ತನ್ನದಾಗಿಸಿಕೊಂಡಿದ್ದಾಳೆ. ಕುಟುಂಬದ ಬೆಂಬಲ ಹಾಗೂ ಶಿಕ್ಷಕರ ಮಾರ್ಗದರ್ಶನ ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಅನಘ ತಿಳಿಸಿದ್ದಾಳೆ.ಅನಘೆಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಿಂದಲೇ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಅನಘೆಯ ಯಶಸ್ಸು ತೀರ್ಥಹಳ್ಳಿ ಮಾತ್ರವಲ್ಲದೆ ಸಂಪೂರ್ಣ ಶಿವಮೊಗ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿದೆ.ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಗೂ ಇನ್ನಷ್ಟು ಸಾಧನೆ ಮಾಡಲು ಅನಘ ಸಂಕಲ್ಪಗೊಂಡಿದ್ದಾಳೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.


