
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ಸಂಗ್ರಹದ ವಿರುದ್ಧ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 86 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಿದ್ದಾರೆ. ಶ್ವೇತಾ ಬಿಡಿಕರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಸ್ಥಳೀಯವಾಗಿ ಗಮನ ಸೆಳೆದಿದೆ.ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕುಸಿದಿರುವುದನ್ನು ದುರುಪಯೋಗಪಡಿಸಿಕೊಂಡ ಮರಳು ದಂಧೆ ಖೋರರು, ನದಿ ಪಾತ್ರವನ್ನು ಬಗೆಯುತ್ತಾ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.

ಅದರ ಆಧಾರದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ತಂಡ, ಹಿಪ್ಪರಗಿ ಪ್ರದೇಶದಲ್ಲಿ ದಾಳಿ ನಡೆಸಿ ದೊಡ್ಡ ಪ್ರಮಾಣದ ಮರಳನ್ನು ವಶಕ್ಕೆ ಪಡೆದಿದೆ.ಈ ಸಂದರ್ಭದಲ್ಲಿ ಅಧಿಕಾರಿಗಳು ಮಾತನಾಡಿ, ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಲೆಕ್ಕಿಸದೇ ಕೆಲವರು ನಿರಂತರವಾಗಿ ಮರಳು ದಂಧೆಯಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ನದಿ ಪರಿಸರ ಹಾನಿಯಾಗುವಂತ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಹಲವು ದಿನಗಳಿಂದ ರಾತ್ರಿ ವೇಳೆ ಮರಳು ಸಾಗಣೆ ನಡೆಯುತ್ತಿದ್ದು, ಕೆಲ ಪ್ರಭಾವಿ ವ್ಯಕ್ತಿಗಳ ಕಾಣದ ಕೈಗಳು ಇದಕ್ಕೆ ಬೆಂಬಲ ನೀಡುತ್ತಿರುವ ಅನುಮಾನ ವ್ಯಕ್ತವಾಗಿದೆ.

ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುವುದರ ಜೊತೆಗೆ ಪರಿಸರಕ್ಕೂ ಹಾನಿ ಉಂಟಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.ಅಕ್ರಮ ಮರಳು ಸಂಗ್ರಹ ಹಾಗೂ ಸಾಗಣೆ ವಿರುದ್ಧ ಮುಂದುವರೆದೂ ಇಂತಹ ದಾಳಿಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಿಂದ ಮರಳು ದಂಧೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ಸಾರ್ವಜನಿಕರು ಅಧಿಕಾರಿಗಳ ಕ್ರಮವನ್ನು ಮೆಚ್ಚಿದ್ದಾರೆ.


