
ಕೊಪ್ಪಳ: ಮಹಾನ್ ಚಿಂತಕ ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ನಗರದಲ್ಲಿ ಗೌರವಪೂರ್ವಕವಾಗಿ ಆಚರಣೆ ನಡೆಯಿತು.ನಗರದ ಗದಗ ರಸ್ತೆಯಲ್ಲಿರುವ ಶಿವಪ್ರಿಯಾ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಬಸವರಾಜ ಹನಸಿ ಮಾತನಾಡಿ, “ನಮ್ಮ ನಾಡಿನಲ್ಲಿ ಅನೇಕ ಮಹನೀಯರು ಜನಿಸಿದ್ದು, ಅದರಲ್ಲಿ ನಮ್ಮೆಲ್ಲರ ಬದುಕಿಗೆ ಬೆಳಕಾದ ಮಹಾನ್ ವ್ಯಕ್ತಿ ಅಂಬೇಡ್ಕರ್. ಅವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ, ಸರ್ವ ಸಮಾಜದ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕರು” ಎಂದು ಹೇಳಿದರು.ಅವರು ಮುಂದುವರೆದು, “ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವಂತಹ ಜ್ಞಾನಭಂಡಾರ ಹೊಂದಿದವರು. ತಮ್ಮ ಜೀವನದಲ್ಲಿ ಅನೇಕ ಕಷ್ಟ, ನೋವು, ಅವಮಾನಗಳನ್ನು ಎದುರಿಸಿದರೂ ತಮ್ಮ ಗುರಿಯನ್ನು ಬಿಟ್ಟಿರಲಿಲ್ಲ. ಹಿಂದುಳಿದವರು, ಬಡವರು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ ಅವರ ಪಾಲಿನ ದೀಪವಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಜೀಯಾಬೇಗಂ ಹಾಗೂ ಕಾನೂನು ವಿದ್ಯಾರ್ಥಿಗಳಾದ ನರೇಂದ್ರ, ರಾಘವೇಂದ್ರ, ಶಿವಕುಮಾರ್, ನಿರುಪಾದಿ, ಬಸವರಾಜ, ಮಧು, ಸುದಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಕಳಕೇಶ ಬೇವಿನಗಿಡದ, ಕೊಪ್ಪಳ✍🏻




