
ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ ಹಾಗೂ ಕುಖ್ಯಾತ “ಗರುಡ ಗ್ಯಾಂಗ್”ನ ಸಕ್ರಿಯ ಸದಸ್ಯನಾಗಿದ್ದ ಮಹಮ್ಮದ್ ಅಲ್ಪಾಜ್ (25) ಅನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿ ನಿವಾಸಿಯಾಗಿರುವ ಮಹಮ್ಮದ್ ಅಲ್ಪಾಜ್, ತಂದೆ ಮೊಹಮ್ಮದ್ ಅಶ್ರಫ್ ಅವರ ಪುತ್ರನಾಗಿದ್ದು, ಇತ್ತೀಚೆಗೆ ಕುಂದಾಪುರ ಕಸಬಾ ಗ್ರಾಮದಲ್ಲಿ ವಾಸವಾಗಿದ್ದಾನೆ. ಈತನ ವಿರುದ್ಧ ಅನೇಕ ಗಂಭೀರ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಏಪ್ರಿಲ್ 24, 2026ರಂದು ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ.ಮಹಮ್ಮದ್ ಅಲ್ಪಾಜ್ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ ಹಾಗೂ ಕುಂದಾಪುರ ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯಲ್ಲಿಯೂ ಈತನ ವಿರುದ್ಧ ಅಪರಾಧ ಪ್ರಕರಣಗಳಿವೆ. ಒಟ್ಟಾರೆ 10 ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನ ಮೇಲೆ ಕೊಲೆಯತ್ನದ 2 ಪ್ರಕರಣಗಳು, ದರೋಡೆ 1, ದರೋಡೆ ಯತ್ನ 1, ಹಲ್ಲೆ 1, ಅಕ್ರಮ ಕೂಟ 2, ಅಪಹರಣ 1 ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ 1 ಪ್ರಕರಣ ಸೇರಿದಂತೆ ಇತರ ಗಂಭೀರ ಆರೋಪಗಳಿವೆ.ಈ ಪ್ರಕರಣಗಳಲ್ಲಿ ಒಂದನ್ನು ನ್ಯಾಯಾಲಯ ಖುಲಾಸೆ ಮಾಡಿದ್ದು, ಉಳಿದ ಎಂಟು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಮತ್ತೊಂದು ಪ್ರಕರಣದ ತನಿಖೆ ಮುಂದುವರಿದಿದೆ. ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಹಿನ್ನೆಲೆ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗೂಂಡಾ ಕಾಯ್ದೆಯಡಿ ಬಂಧನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತ ಮಹಮ್ಮದ್ ಅಲ್ಪಾಜ್ ಅವರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶ ನೀಡಲಾಗಿದೆ. ಜಿಲ್ಲೆಯಲ್ಲಿನ ಅಪರಾಧ ಚಟುವಟಿಕೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂತಹ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮುಂದಾಗಿದ್ದಾರೆ.ಈ ಕ್ರಮದಿಂದ ಸ್ಥಳೀಯರಲ್ಲಿ ಆತಂಕ ಕಡಿಮೆಯಾಗಿದ್ದು, ಪೊಲೀಸರು ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕಾನೂನು ವಿರೋಧಿ ಚಟುವಟಿಕೆಗಳ ಮೇಲೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.


