Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಬೇಳೂರಿನಲ್ಲಿ ಶಂಕರ ಜಯಂತಿ ಸಂಭ್ರಮ – ಎಂಟು ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ!
ಜಿಲ್ಲೆ

ಬೇಳೂರಿನಲ್ಲಿ ಶಂಕರ ಜಯಂತಿ ಸಂಭ್ರಮ – ಎಂಟು ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ!

Spread the love

ಬೇಲೂರು:ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಶ್ರೀ ನಂಜುಂಡೇಶ್ವರ ದೇಗುಲದಲ್ಲಿ ವೈಶಾಖ ಶುದ್ಧ ಪಂಚಮಿಯಿಂದ ದ್ವಾದಶಿವರೆಗೆ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಇದರ ಅಂಗವಾಗಿ ಮಂಗಳವಾರ ಶಂಕರ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ಎಂಟು ಬೀದಿಗಳಲ್ಲಿ ನೆರವೇರಿತು.ಕಾರ್ಯಕ್ರಮದಲ್ಲಿ ಮಾತನಾಡಿದ ವೇದಬ್ರಹ್ಮ ಕೆ.ಆರ್. ಮಂಜುನಾಥ್ ಅವರು, ಜಗದ್ಗುರು ಆದಿ ಶಂಕರಾಚಾರ್ಯರು ಸನಾತನ ಧರ್ಮಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತ್ಯಗತ್ಯವೆಂದರು. ಪಂಚಮಿಯಿಂದ ದ್ವಾದಶಿವರೆಗೆ ದೇವಾಲಯದಲ್ಲಿ ನಿರಂತರವಾಗಿ ವಿವಿಧ ಪೂಜೆ, ಅಭಿಷೇಕ ಹಾಗೂ ಪಾರಾಯಣ ಕಾರ್ಯಕ್ರಮಗಳು ನಡೆದಿದ್ದು, 50 ವರ್ಷಗಳ ಪುರಾತನ ಶಂಕರಾಚಾರ್ಯರ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ಮತ್ತು ಅಷ್ಟೋತ್ತರ ಅರ್ಚನೆ ನೆರವೇರಿಸಲಾಯಿತು. ಶಂಕರ ಭಗವತ್ಪಾದರ ಸ್ತೋತ್ರಗಳು ಹಾಗೂ ಭಾಷ್ಯಗಳ ಪಾರಾಯಣವೂ ಈ ಸಂದರ್ಭದ ವಿಶೇಷವಾಗಿತ್ತು ಎಂದರು.ಬ್ರಾಹ್ಮಣ ಸ್ಮಾರ್ತ ಮಂಡಳಿ ಅಧ್ಯಕ್ಷ ತೊ. ಚ. ನರಸಿಂಹಮೂರ್ತಿ ಅವರು ಮಾತನಾಡಿ, ಕಳೆದ ಐದು ದಶಕಗಳಿಂದಲೂ ಇಲ್ಲಿ ಶಂಕರ ಜಯಂತಿ ಅಂಗವಾಗಿ ಏಳು ದಿನಗಳ ವಿಶೇಷ ಪೂಜೆ ಮತ್ತು ಪಾರಾಯಣ ನಡೆಯುತ್ತಿದೆ. ಕೇವಲ 32 ವರ್ಷಗಳ ಜೀವನದಲ್ಲಿ ಆದಿ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಅದ್ವೈತ ವೇದಾಂತದ ಸಂದೇಶವನ್ನು ಹರಡಿದರು. ವೈಷ್ಣವ ಕ್ಷೇತ್ರವಾದ ಬೇಲೂರಿನಲ್ಲಿ ಶಂಕರ ಜಯಂತಿ ಆಚರಣೆ, ಹರಿ-ಹರರಲ್ಲಿ ಭೇದವಿಲ್ಲ ಎಂಬ ಅವರ ತತ್ವಕ್ಕೆ ಸಾಕ್ಷಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಶಂಕರಾಚಾರ್ಯರ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ಗಾಯತ್ರಿ ಭಜನಾ ಮಂಡಳಿ ಹಾಗೂ ವಿಪ್ರಭಾಂದವರ ಜಯಘೋಷಗಳ ನಡುವೆ ಎಂಟು ಬೀದಿಗಳಲ್ಲಿ ಭಕ್ತಿಭಾವದಿಂದ ಮೆರವಣಿಗೆ ಮಾಡಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸ್ಮಾರ್ತ ಮಂಡಳಿಯ ಶಕ್ತಿಮೂರ್ತಿ, ರವೀಂದ್ರ, ಚಂದ್ರಶೇಖರ್, ರಮೇಶ್ ಆನಂಬಿ, ಸುರೇಶ್, ನಾರಾಯಣರಾವ್, ನಾಗರಾಜ್, ನಾಗಭೂಷಣ್, ಶಾರದಮ್ಮ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Related Posts