
ಬೇಲೂರು: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ನಿಯಂತ್ರಣ ಕುರಿತ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಸಚಿವ ಕೃಷ್ಣ ಬೈರೇಗೌಡ ಅವರು, ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ನಂತರ ಬೇಲೂರು–ಚಿಕ್ಕಮಗಳೂರು ರೈಲ್ವೆ ಕಾಮಗಾರಿಯನ್ನು ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಯೋಜನೆ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಯೋಜನೆ ಈಗ ಅಂತಿಮ ಹಂತ ತಲುಪಿದ್ದು, ಭೂಸ್ವಾಧೀನ ಪ್ರಕ್ರಿಯೆಯೂ ಬಹುತೇಕ ಮುಗಿದಿದೆ ಎಂದರು.ರಾಜ್ಯ ಸರ್ಕಾರವು ಯೋಜನೆಗೆ ಶೇ.75ರಷ್ಟು ಅನುದಾನ ನೀಡುತ್ತಿದ್ದು, ಭೂಸ್ವಾಧೀನ ವೆಚ್ಚ ಸೇರಿದಂತೆ ಒಟ್ಟು ಸುಮಾರು ₹165 ಕೋಟಿ ಭರಿಸಿದೆ. ಕಾಮಗಾರಿಯ ಅನುಷ್ಠಾನವನ್ನು ರೈಲ್ವೆ ಇಲಾಖೆ ನೋಡಿಕೊಳ್ಳುತ್ತಿದ್ದು, ಗಡುವಿನೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.ಇದೇ ವೇಳೆ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಜಲ ಜೀವನ್ ಮಿಷನ್ ಕಾಮಗಾರಿಗಳ ಪ್ರಗತಿಯನ್ನು ಸಹ ಪರಿಶೀಲಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನದ ಗೊಂದಲಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದ್ದು, ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ ಎಂದು ವಿವರಿಸಿದರು.ಆನೆ–ಮಾನವ ಸಂಘರ್ಷಕ್ಕೆ ತುರ್ತು ಕ್ರಮಚಿಕ್ಕಮಗಳೂರು ಹಾಗೂ ಬೇಲೂರು–ಸಕಲೇಶಪುರ ಗಡಿಭಾಗದಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷದ ಹಿನ್ನೆಲೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಇನ್ನೂ ಅನುಮೋದನೆ ಸಿಗದಿರುವುದರಿಂದ, ಈ ವರ್ಷದೊಳಗೆ ರಾಜ್ಯವೇ ಪರ್ಯಾಯ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.ಕಾಫಿ ತೋಟದ ಮಾಲೀಕರು ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು. ಆನೆಗಳ ಚಲನವಲನದ ಮಾಹಿತಿ ಮುಚ್ಚಿಡುವುದು ಅಥವಾ ಸಿಬ್ಬಂದಿಗೆ ತೋಟ ಪ್ರವೇಶ ನಿರಾಕರಿಸುವುದು ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಿದರು.ಅರಣ್ಯ ಇಲಾಖೆಗೆ ಆನೆಗಳ ಚಲನವಲನವನ್ನು ನಿಖರವಾಗಿ ಟ್ರ್ಯಾಕ್ ಮಾಡುವಂತೆ ಹಾಗೂ ಸಾರ್ವಜನಿಕರಿಗೆ ಸಾಮಾನ್ಯ ಎಚ್ಚರಿಕೆಯ ಬದಲು ನಿರ್ದಿಷ್ಟ ಸ್ಥಳದ ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವರದಿ : ನೀಲಕಂಠ ಬೇಲೂರು




