
ಸಂಸ್ಥೆಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಮರುನಾಮಕರಣ; ಅಪಘಾತ ರಹಿತ ಚಾಲಕರಿಗೆ ಬೆಳ್ಳಿ-ಚಿನ್ನದ ಪದಕ ಘೋಷಣೆಬೆಳಗಾವಿ ಬ್ರೇಕಿಂಗ್ಬೆಳಗಾವಿಯಲ್ಲಿ ನಡೆದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು.ಸಮಾರಂಭದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಬೆಳಗಾವಿ ಭಾಗದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ 250 ನೂತನ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಅದರಲ್ಲಿ 100 ವಿದ್ಯುತ್ ಚಾಲಿತ (ಇ-ಬಸ್) ಬಸ್ಸುಗಳು ಬೆಳಗಾವಿಗೆ ಬರಲಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಮುಂದಿನ ಹಂತದಲ್ಲಿ ಇನ್ನೂ 120 ಬಸ್ಸುಗಳು ಸೇರಲಿವೆ.

2019ರಿಂದ 2023ರವರೆಗೆ ಬಸ್ ಖರೀದಿ ನಡೆದಿರದ ಹಿನ್ನೆಲೆಯಲ್ಲಿ ಹಲವು ಬಸ್ಸುಗಳು ಹಳೆಯದಾಗಿವೆ. ಇದನ್ನು ಮನಗಂಡು ದೊಡ್ಡ ಮಟ್ಟದಲ್ಲಿ ಬಸ್ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿಗೆ ಆದ್ಯತೆಯಾಗಿ ಬಸ್ಸುಗಳನ್ನು ಬಿಡಲು ಸೂಚನೆ ನೀಡುವುದಾಗಿ ಸಚಿವರು ಭರವಸೆ ನೀಡಿದರು.ನೇಮಕಾತಿ ವಿಷಯದಲ್ಲೂ ಮಾಹಿತಿ ನೀಡಿದ ಸಚಿವರು, ಹಿಂದೆ 16 ಸಾವಿರ ನೇಮಕಾತಿ ಮಾಡಲಾಗಿದೆ. ಅನುಕಂಪ ಆಧಾರ ಸೇರಿ 10 ಸಾವಿರ ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು.ಇದೇ ವೇಳೆ ಸಂಸ್ಥೆಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ಮರುನಾಮಕರಣ ಮಾಡುವ ಮನವಿ ಬೋರ್ಡ್ನಲ್ಲಿ ಅನುಮೋದನೆಗೊಂಡಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಹೆಸರು ಬದಲಾವಣೆ ಮಾಡಲಾಗುವುದು ಎಂದು ಘೋಷಿಸಿದರು.

ಚಾಲಕರ ಪ್ರೋತ್ಸಾಹಕ್ಕಾಗಿ ಹೊಸ ಯೋಜನೆ ಪ್ರಕಟಿಸಿದ ಸಚಿವರು, 5 ವರ್ಷ ಅಪಘಾತ ಮಾಡದೆ ಚಾಲನೆ ಮಾಡಿದವರಿಗೆ ಬೆಳ್ಳಿ ಪದಕ ಹಾಗೂ 15 ವರ್ಷ ಅಪಘಾತ ರಹಿತ ಸೇವೆ ಸಲ್ಲಿಸಿದವರಿಗೆ ಗೋಲ್ಡ್ ಮೆಡಲ್ ನೀಡಲಾಗುವುದು ಎಂದು ತಿಳಿಸಿದರು.ಒಟ್ಟಾರೆ, ಈ ಘೋಷಣೆಗಳು ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ದೊರಕುವ ನಿರೀಕ್ಷೆ ಮೂಡಿಸಿವೆ.






