
ಕೊಪ್ಪಳ: ವಜ್ರಬಂಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು. ಬಳಿಕ ಗ್ರಾಮ ಹಿರಿಯರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾನವತಾವಾದಿ, ದೀನ ದಲಿತರ ಹರಿಕಾರರಾದ ಅಂಬೇಡ್ಕರ್ ಅವರ ಸೇವೆಯನ್ನು ಸ್ಮರಿಸಲಾಯಿತು.2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಜೈ ಭೀಮ್ ಸಂಘಟನೆಯ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಅವರಿಗೆ ಪ್ರೋತ್ಸಾಹ ನೀಡಲಾಯಿತು.ನಂತರ ಯುವ ಮುಖಂಡರಾದ ಶ್ರೀ ಶರಣಗೌಡ ಪೊಲೀಸ್ ಪಾಟೀಲ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. “ಇತಿಹಾಸದಲ್ಲಿ ರಾಜರು ಖಡ್ಗದ ಮೂಲಕ ಸಾಮ್ರಾಜ್ಯಗಳನ್ನು ಗೆದ್ದಿದ್ದರೂ, ಡಾ. ಅಂಬೇಡ್ಕರ್ ಅವರು ಪೆನ್ನು ಎಂಬ ಆಯುಧದಿಂದ ಜಗತ್ತನ್ನೇ ಗೆದ್ದ ಮಹಾನ್ ವ್ಯಕ್ತಿ. ಅವರು ನಮ್ಮ ದೇಶಕ್ಕೆ ಸಿಕ್ಕ ಅಮೂಲ್ಯವಾದ ವಜ್ರ” ಎಂದು ಶಿಕ್ಷಕ ಶ್ರೀ ಯಮನೂರಪ್ಪ ಎಸ್. ರಗಡದ್ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಂಗವಾಗಿ ಡಾ. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಕೂಡ ಭರ್ಜರಿಯಾಗಿ ನಡೆಯಿತು. ಗ್ರಾಮದ ಹಿರಿಯರಾದ ಕರಿಯಪ್ಪ ಶಾಖಪುರ, ರೇವಣಪ್ಪ ಮ್ಯಾಗೇರಿ, ಕನಕಪ್ಪ ಪೂಜಾರ, ಗುಂಡನಗೌಡ ಮಾಲಿಪಾಟೀಲ್, ಭೀಮಪ್ಪ ಹರಿಜನ, ಶರಣಪ್ಪ ಹರಿಜನ, ಮಾರುತೆಪ್ಪ ಹರಿಜನ, ಯಮನೂರಪ್ಪ ಹರಿಜನ, ರುದ್ರಪ್ಪ ನಡುಲಮನಿ, ನಾಗರಾಜ್ ತಲ್ಲೂರ, ಹುಲಗಪ್ಪ, ಲಕ್ಷ್ಮಣ, ರಾಮಣ್ಣ, ಶರಣಪ್ಪ, ಹಂಪಯ್ಯ ಹಿರೇಮಠ್, ಶಿವಕುಮಾರ್ ಹೊಸಮಠ ಸೇರಿದಂತೆ ಅನೇಕರು ಭಾಗವಹಿಸಿದರು.ಇದೇ ವೇಳೆ ವಜ್ರಬಂಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮದ ಗುರುಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ: ಕಳಕೇಶ ಬೇವಿನಗಿಡದ, ಕೊಪ್ಪಳ.✍🏻



