
28/02/2026ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನಲ್ಲಿ ಒಟ್ಟು 7 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾನ್ ಚಾಲನೆ ನೀಡಿದರು.ಸವಣೂರಿನ ಮೋತಿ ತಲಾಬ್ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಹಾಗೂ ಅಲ್ಲಿ ಪುರ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಮೋತಿ ತಲಾಬ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಕಿಂಗ್ ಟ್ರ್ಯಾಕ್ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.ಇದಲ್ಲದೆ, ಸವಣೂರು ತಾಲೂಕಿನ ವಿವಿಧ ಕೆರೆಗಳ ಅಭಿವೃದ್ಧಿಗೆ ಈಗಾಗಲೇ 150 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಹೇಳಿದರು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ಸವಣೂರು ತಾಲೂಕಿಗೆ ಈಗಾಗಲೇ 650 ಕೋಟಿ ರೂ.ಗೂ ಅಧಿಕ ಅನುದಾನ ತರಲಾಗಿದ್ದು, ಅನೇಕ ಕಾಮಗಾರಿಗಳು ಪ್ರಾರಂಭ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.ರೈತರ ಹಿತದೃಷ್ಟಿಯಿಂದ ಸವಣೂರು ಎತ್ತಿನೀರಾವರಿ ಯೋಜನೆಗೆ 300 ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸುವ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದ ಅನುಮೋದನೆ ದೊರೆತಿದೆ.

ಮುಂಬರುವ ಬಜೆಟ್ ಅಧಿವೇಶನದಲ್ಲಿ ಶಿಶುವಿನಹಾಳ ಶರೀಫ್ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸವಣೂರು ರೈತ ಘಟಕದ ಅಧ್ಯಕ್ಷ ಬಾಬು ಪರಾಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಹರಿಜನ, ಪುರಸಭೆ ಮಾಜಿ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ್, ಮಾಜಿ ಉಪಾಧ್ಯಕ್ಷ ಪೀರ್ ಅಹಮದ್ ಗವಾರಿ, ಲಕ್ಷ್ಮಣ್ ಕನವಳ್ಳಿ, ಅಶೋಕ್ ಮನ್ನಂಗಿ, ಚೆನ್ನಪ್ಪ ಮರಡೂರು, ನೂರ್ ಅಹಮದ್ ಮುಲ್ಲಾ, ನಾಗರಾಜ್ ಬಂಕಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾಮಗಾರಿ ಆಯುಕ್ತರು, ಸಹಾಯಕ ಇಂಜಿನಿಯರ್ ಮಂಜುನಾಥ್ ಬಡಿಗೇರ್ ಹಾಗೂ ಮಾಂತೇಶ್ ತಂಡೂರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವರದಿಗಾರರು: ಮುನ್ನಾ ಗೌಡಗೇರಿಜನಶ್ರೀ ನ್ಯೂಸ್, ಹಾವೇರಿ ಜಿಲ್ಲೆ






