ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬಳೂಟಗಿ ಗ್ರಾಮದ ಸರಕಾರಿ ಹಿರಿಯ ಬಾಲಕ-ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಮ್ಮ ಪಾಲಕರಿಗೆ ಪಾದ ಪೂಜೆ ಮಾಡುವ ಕಾರ್ಯಕ್ರಮವನ್ನು ಶಿಕ್ಷಕರು ಆಯೋಜಿಸಿದ್ದರು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಪಾಲಕರಿಗೆ ಗೌರವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಎಲ್ಲಾ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಸರಸ್ವತಿ ಪೂಜೆ ನೆರವೇರಿಸಿದರು. ಬಳಿಕ ಶಾಲೆಯ ಶಿಕ್ಷಕರಾದ ಪಿ. ಚಿಂತಾಮಣಿ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಬೋಧನೆ ನೀಡಿದರು. ಮಕ್ಕಳಿಂದ ಪ್ರಮಾಣ ವಚನ ಸ್ವೀಕರಿಸಿ, ಜೀವನದಲ್ಲಿ ಶಿಸ್ತು ಹಾಗೂ ಕೃತಜ್ಞತೆಯ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಸಾಬ್ ಕಟ್ಟಿಮನಿ, “ಮಕ್ಕಳು ಪಾಲಕರ ಪಾದ ಪೂಜೆ ಮಾಡುವುದು ಅತ್ಯಂತ ಉತ್ತಮ ಸಂಸ್ಕೃತಿ.

ಇವತ್ತಿನ ದಿನ ಮಾತ್ರವಲ್ಲ, ಜೀವನಪೂರ್ತಿ ಪಾಲಕರಿಗೆ ಗೌರವ ನೀಡಬೇಕು. ಅವರ ಶ್ರಮದ ಫಲವೇ ನಮ್ಮ ಬೆಳವಣಿಗೆ,” ಎಂದು ತಿಳಿಸಿದರು.ಕಾರ್ಯಕ್ರಮದ ಅಂತ್ಯದಲ್ಲಿ ಸಿಹಿ ಅಡುಗೆ ಮಾಡಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರಿಗೆ ಸಿಹಿ ಭೋಜನವನ್ನು ಬಡಿಸಲಾಯಿತು. ನಂತರ ಶಿಕ್ಷಕರು, ಶಿಕ್ಷಕಿಯರು, ಪಾಲಕರು ಹಾಗೂ ಮಕ್ಕಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಶಶಿಧರ್ ಹೊಸಮನಿಕೊಪ್ಪಳ ಜಿಲ್ಲೆ, ಯಲಬುರ್ಗಾ





